ಮುರ್ಷಿದ್, ಕುಲಿ ಜಫಾರ್ ಖಾನ್ _ 
	ಭಾರತವನ್ನಾಳಿದ ಮೊಗಲರ ಸೇವೆಯಲ್ಲಿದ್ದ ಒಬ್ಬ ಪರ್ಷಿಯನ್ ಅಧಿಕಾರಿ. ಮೊಗಲರ ಆಡಳಿತ ಸೇವೆಯಲ್ಲಿ ಸೇರಿಕೊಂಡು ಭಾರತಕ್ಕೆ ಬಂದ. ಪ್ರಾರಂಭದಲ್ಲಿ ಸೈನ್ಯದಲ್ಲಿ ಲೆಪ್ಟಿನೆಂಟ್ ಆಗಿ ಸೇವೆ ಸಲ್ಲಿಸಿದ. ಔರಂಗಜೇಬನ ಕಾಲದಲ್ಲಿ ದಖ್ಖನ್ನಿನ ದಿವಾನನಾದ. ಆಗ ಕಂದಾಯ ಮತ್ತು ಜಮೀನು ವಿಲೇವಾರಿ ಪದ್ಧತಿಗಳನ್ನು ಈತ ಕ್ರಮಬದ್ಧಗೊಳಿಸಿದ. ಭೂಮಿ ಅಳೆಯುವುದು, ಅಳತೆಮಾಡುವಾಗ ಒಂದು ಸಮರೂಪದ ಮಾನ ಬಳಸುವುದು ಮತ್ತು ಉತ್ಪಾದನೆಯ ಪ್ರಮಾಣವನ್ನು ಅಂದಾಜು ಮಾಡುವುದರ ಮೂಲಕ ಕಂದಾಯವನ್ನು ಹಣ ಅಥವಾ ವಸ್ತುವಿನ ರೂಪದಲ್ಲಿ ಪಡೆಯುವುದು ಮೊದಲಾದ ಸೂತ್ರಗಳನನ್ನು ಅನ್ವಯಿಸಿ ಸಾಧ್ಯವಾದಷ್ಟು ಮಟ್ಟಿಗೆ ಆಚರಣೆಗೆ ತರಲು ಪ್ರಯತ್ನಿಸಲಾಯಿತು. ಇವನ ಈ ಕ್ರಮಗಳಿಂದ ಸರ್ಕಾರದ ವರಮಾನ ಹೆಚ್ಚಿತು. ದಕ್ಷ ಅಧಿಕಾರಿಯೆಂಬ ಹೆಸರು ಪಡೆದಿದ್ದ ಇವನನ್ನು ಬಂಗಾಲದ ದಿವಾನನಾಗಿ ನೇಮಿಸಲಾಯಿತು (1701).

	ಇವನ ಆಡಳಿತ ಕಾಲದಲ್ಲಿ ಬಂಗಾಲ ಪ್ರಾಂತ್ಯದ ಹಣಕಾಸಿನ ವ್ಯವಸ್ಥೆ ಉತ್ತಮಗೊಂಡಿತು; ಕಂದಾಯ ವಸೂಲಿ ಕ್ರಮವನ್ನು ಮಧ್ಯವರ್ತಿ ಜಮೀನುದಾರರು ಮತ್ತು ಜಹಗೀರುದಾರರಿಂದ ಮುಕ್ತಗೊಳಿಸಿ ನೇರವಾಗಿ ತನ್ನ ಕೈಗೆ ತೆಗೆದುಕೊಂಡ. ಜನರಿಗೆ ನಿಷ್ಪಕ್ಷಪಾತವಾದ ನ್ಯಾಯ ಮತ್ತು ದಕ್ಷ ಆಡಳಿತ ದೊರೆಯಿತು. ಇವನು ತೋರಿಸಿದ ಆಡಳಿತ ದಕ್ಷತೆಯಿಂದಾಗಿ ಬಂಗಾಲದ ಸ್ವತಂತ್ರ ವೈಸ್‍ರಾಯ್ ಪದವಿ ದೊರಕಿತು.

	ಪ್ರಾಂತೀಯ ರಾಜಧಾನಿಯಾಗಿ ಢಾಕಾದಿಂದ ಆಡಳಿತ ಕಚೇರಿಗಳನ್ನು ಮುರ್ಷಿದಾಬಾದ್‍ಗೆ ವರ್ಗಾಯಿಸಿದ (1704). ಇವನ ಹೆಸರಿನಲ್ಲಿಯೇ ಈ ಪಟ್ಟಣ ಸ್ಥಾಪಿಸಲಾಯಿತು. ಇದೇ ಬಂಗಾಲದಲ್ಲಿದ್ದ ಕೊನೆಯ ಮುಸ್ಲಿಮ್ ರಾಜಧಾನಿ.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ